Dehradun car accident: ಡೆಹ್ರಾಡೂನ್ನಲ್ಲಿ ರಾತ್ರಿ ಸುಮಾರು 1.30 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 6 ಮಂದಿ ಸಾವನಪ್ಪಿದ್ದಾರೆ.
ಅತೀ ವೇಗದಲ್ಲಿ ಬಂದ ಇನ್ನೋವಾ ಎಮ್ಯುವಿ ಕಾರು, ಎದುರು ಚಲಿಸುತ್ತಿದ್ದ ಕಂಟೇನರ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 25 ವರ್ಷದೊಳಗಿನ ಮೂವರು ಯುವಕರು ಹಾಗೂ ಮೂವರು ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ, ಒಬ್ಬರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ:
ಮಂಗಳವಾರ ಬೆಳಗಿನ ಜಾವ 1.30 ರ ಸುಮಾರಿಗೆ ONGC Chowk ನ ಬಳಿ ವೇಗವಾಗಿ ಬಂದ ಇನ್ನೋವಾ ಎಮ್ಯುವಿ ಕಾರು, ಕಂಟೇನರ್ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರೆಲ್ಲರೂ 25 ವರ್ಷದೊಳಗಿನ ವಿದ್ಯಾರ್ಥಿಗಳಾಗಿದ್ದಾರೆ.
ತಡ ರಾತ್ರಿ ಪಾರ್ಟಿ ಮುಗಿಸಿಕೊಂಡು ಹೊರಟಿದ್ದ ವಿದ್ಯಾರ್ಥಿಗಳು, ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾದಂತೆ ಘಟನೆ ಸಂಭವಿಸುವ ಮೊದಲು ಮಧ್ಯಮ ವೇಗದಲ್ಲೇ ಗಾಡಿ ಚಲಾಯಿಸಿಕೊಂಡು ಬಂದಿದ್ದಾರೆ, ನಂತರದಲ್ಲಿ ಅತೀ ವೇಗವಾಗಿ ಚಲಿಸಿ ಟ್ರಕ್ಗೆ ಡಿಕ್ಕಿ ಹೊಡೆದಾಗ ಘಟನೆ ಸಂಭವಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಘಟನೆಯಲ್ಲಿ ಸಾವನಪ್ಪಿರುವವರು, ಗುಣೀತ್ ಸಿಂಗ್, ಕಾಮಾಕ್ಷಿ ಸಿಂಘಲ್, ನವ್ಯಾ ಗೋಯಲ್, ರಿಷಭ್ ಜೈನ್ ಮತ್ತು ಅತುಲ್ ಅಗರ್ವಾಲ್ – ಇವರೆಲ್ಲರೂ ಡೆಹ್ರಾಡೂನ್ ನಿವಾಸಿಗಳೆಂದು ತಿಳಿದು ಬಂದಿದೆ. ಹಾಗೂ ಕುನಾಲ್ ಕುಕ್ರೆಜಾ, ಹಿಮಾಚಲ ಪ್ರದೇಶದ ಚಂಬಾದವರೆಂದು ತಿಳಿದು ಬಂದಿದೆ.
ಅಪಘಾತಯಲ್ಲಿ ಬದುಕಿದ್ದ ಸಿದ್ದೇಶ್ ಆಗರ್ವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ತಲೆಗೆ ಪೆಟ್ಟು ಬಿದ್ದು ಗಂಭೀರ ಗಾಯಗೊಂಡು ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಘಟನೆ ಕುರಿತು ಮಾಹಿತಿ ತಿಳಿಯಲು ಸಾಧ್ಯವಾಗಿಲ್ಲವೆಂದು ಕ್ಯಾಂಟ್ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ ಸಿ ಭಟ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಕಂಟೇನರ್ ಟ್ರಕ್ ಚಾಲಕನದು ಯಾವುದೇ ತಪ್ಪಿಲ್ಲ, ಇನ್ನೋವಾ ಎಮ್ಯುವಿ ಕಾರ್ ಚಾಲಕ, ಮತ್ತೊಂದು ಕಾರನ್ನು ಹಿಂದಿಕ್ಕಲು ಹೋಗಿ, ಸಮಯವನ್ನು ತಪ್ಪಾಗಿ ನಿರ್ಣಯಿಸಿ, ಕಂಟೇನರ್ ಟ್ರಕ್ಕಿನ ಎಡ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತಕ್ಕೆ ಕಾರಣವಾಯಿತೆಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಕಿತ್ತು ಹೋದ ಕಾರಿನ ಸನ್ ರೂಫ್ ಸಾಕ್ಷಿಯಾಗಿದೆ. ಅಪಘಾತದ ಕೆಲವು ಬೆಚ್ಚಿ ಬೀಳಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.