Article 370 restoration

Article 370 Restoration: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ, ಪ್ರತ್ಯೇಕ ರಾಜ್ಯ, ಪ್ರತ್ಯೇಕ ಬಾವುಟ, ಪ್ರತ್ಯೇಕ ರೀತಿ ರಿವಾಜುಗಳೊಳಗೊಂಡಿದ್ದ ಆರ್ಟಿಕಲ್ 370 ರ ವಿಧಿಯನ್ನು 2019 ರಲ್ಲಿ ತೆಗೆದುಹಾಕಲಾಗಿತ್ತು. ಆದರೆ ಬುಧವಾರ ಜಮ್ಮು-ಕಾಶ್ಮೀರ ವಿಧಾನಸಭೆಯು ತಗೆದುಹಾಕಲಾಗಿದ್ದ ಆರ್ಟಿಕಲ್ 370 ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿತ್ತು.

ಆದ್ದರಿಂದ ಇಂದಿನ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಪ್ರತಿಭಟಿಸುವ ಮೂಲಕ ನೀಡಿದ್ದ ನಿರ್ಣಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ನಡುವೆ ಬಿಜೆಪಿ ಶಾಸಕ ಹಾಗೂ ವಿರೋಧ ಪಕ್ಷದ ನಾಯಕ ಸುನೀಲ್ ಕುಮಾರ್ ಶರ್ಮಾ, ನೆನ್ನೆ ನೀಡಿದ್ದ ನಿರ್ಣಯದ ಕುರಿತಾಗಿ ಕಲಾಪದಲ್ಲಿ ಮಾತನಾಡುತ್ತಿರುವಾಗ, ಅವಾಮಿ ಇತ್ತೆಹಾದ್ ಪಕ್ಷದ ನಾಯಕ ಲಂಗೇಟ್ ಶೇಖ್ ಖುರ್ಷೀದ್ ಅವರು ಆರ್ಟಿಕಲ್ 370 ಮತ್ತು 35 A ಮರುಸ್ಥಾಪಿಸುವಂತೆ ಬರೆಸಿದ್ದ ಬ್ಯಾನರ್‌ವೊಂದನ್ನು ವಿಧಾನಸಭೆಯ ಒಳಭಾಗಕ್ಕೆ ಪ್ರವೇಶಿಸಿ ಪ್ರದರ್ಶಿಸಿದರು.

ಇದರಿಂದ ಕುಪಿತಗೊಂಡ ಬಿಜೆಪಿ ಸದಸ್ಯರು ಬ್ಯಾನರ್ ವಶಪಡಿಸಿಕೊಂಡು ಹರಿದು ಹಾಕಿ, ಸ್ಪೀಕರ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ (NC – National Conferance) ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು.

ನಂತರ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರು ವಿಧಾನಸಭೆಯ ತೀರ ಒಳ ಭಾಗಕ್ಕೆ ನುಗ್ಗಿದ್ದ ಸದಸ್ಯರನ್ನು ಹೊರಹಾಕಲು ಮಾರ್ಷಲ್‌ಗಳಿಗೆ ಆದೇಶಿಸಿದರು. ತದನಂತರ ಬಿಜೆಪಿ ಶಾಸಕರು ಹಾಗೂ ಮಾರ್ಷೆಲ್‌ಗಳ ನಡುವೆ ವಾಗ್ವಾದ ಉಂಟಾಯಿತು. ನಂತರ ಸ್ಪೀಕರ್ 15 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು.

ಅಷ್ಟಕ್ಕೂ ನಿಲ್ಲದ ಗದ್ದಲ, ಕಲಾಪ ಮತ್ತೆ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಪ್ರತಿಭಟನೆ ಮುಂದುವರೆಸಿದರು. ‘ಆಗಸ್ಟ್ 5 ಜಿಂದಾಬಾದ್’, ‘ಜೈ ಶ್ರೀ ರಾಮ್’, ‘ವಂದೇ ಮಾತರಂ’, ‘ದೇಶ್ ವಿರೋಧಿ ಅಜೆಂಡಾ ನಹೀ ಚಲೇಗಾ’, ‘ಜಮ್ಮು ವಿರೋಧ ಅಜೆಂಡಾ ನಹೀ ಚಲೇಗಾ’ ಮುಂತಾದ ಘೋಷಣೆಗಳನ್ನು ಕೂಗಿದರು.

ಜಮ್ಮು-ಕಾಶ್ಮೀರ ವಿಧಾನಸಭೆಯ ಸದಸ್ಯರಾದ ಸತೀಶ್ ಶರ್ಮಾ ಬಿಜೆಪಿ ಒಡೆದು ಆಳುವ ನಾಟಕವಾಡುತ್ತಿದೆ ಎಂದಾಗ ಬಿಜೆಪಿ ಶಾಸಕರು ಭಾರತ ಮಾತೆ ಎಲ್ಲಾರಿಗೂ ಸೇರಿದ್ದು, ‘ಬಲಿದಾನ್ ಹುವೇ ಜಹಾನ್ ಮುಖರ್ಜಿ ವೋ ಕಾಶ್ಮೀರ್ ಹಮಾರಾ ಹೈ’ ಎಂದು ಘೋಷಣೆ ಕೂಗಿದರೆ, ಇದಕ್ಕೆ ಪ್ರತಿಯಾಗಿ ಎನ್‌ಸಿ ಶಾಸಕರು ‘ಜಿಸ್ ಕಾಶ್ಮೀರ್ ಕೋ ಖೂನ್ ಸೇ ಸೀಂಚಾ, ವೋ ಕಾಶ್ಮೀರ್ ಹಮಾರಾ ಹೈ’ ಎಂದು ಘೋಷಣೆ ಕೂಗಿದರು.

ಈ ಗಲಾಟೆಯಲ್ಲಿ ಮೂವರು ಬಿಜೆಪಿ ಶಾಸಕರನ್ನು ಸದನದಿಂದ ಹೊರಹಾಕಲಾಯಿತು. ಈ ವಾದ ಪ್ರತಿವಾದಗಳ ನಡುವೆ ಸ್ಪೀಕರ್ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದರು.