Tirupati laddu images

ತಿರುಪತಿ ಲಡ್ಡು – ತಿರುಪತಿಯ ಪ್ರಸಾದ ಲಾಡು ಅಥವಾ ಶ್ರೀವರಿ ಲಡ್ಡು ತಯಾರಿಸಲು ಉಪಯೋಗಿಸುವ ತುಪ್ಪದಲ್ಲಿ ಹಂದಿ, ದನದ ಕೊಬ್ಬಿನಂಶ ಜೊತೆಗೆ ಮೀನಿನ ಎಣ್ಣೆಯ ಅಂಶವಿರುವುದು ಪತ್ತೆಯಾಗಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಮ್ಮ ರಾಜ್ಯದ ಹಿಂದಿನ ‘ವೈಎಸಾರ್‌ಪಿ ಸರ್ಕಾರ’ ವು ತಿರುಪತಿ ಲಾಡು ತಯಾರಿಸಲು ಅಗ್ಗದ ಕಲಬೆರಕೆ ತುಪ್ಪವನ್ನು ಬಳಸುತ್ತಿತ್ತು ಎಂದು ಆಂಧ್ರಪ್ರದೇಶದ ಸಿಎಂ ‘ಚಂದ್ರಬಾಬು ನಾಯ್ಡು’ ರವರು ಆರೋಪಿಸಿದ್ದರು. ತದನಂತರ ಟಿಡಿಪಿಯ (ತೆಲಗು ದೇಶಂ ಪಾರ್ಟಿ) ವಕ್ತಾರ ಒಂದು ಪತ್ರಿಕಾಗೋಷ್ಠಿ ನಡೆಸಿ National Dairy Development Board (NDDB) ನ ಲ್ಯಾಬ್ ರಿಪೋರ್ಟ್ ಅನ್ನು ಸಾಕ್ಷಿಯಾಗಿ ನೀಡಿದ್ದು, ಲಾಡುಗಳಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿರುವುದನ್ನು ಪ್ರಯೋಗಾಲಯದ ಪರೀಕ್ಷೆಗಳು ಬಹಿರಂಗಪಡಿಸಿದೆ, ಸದ್ಯ ಈ ರಿಪೋರ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಿಂದುಗಳ ಧಾರ್ಮಿಕ ನಂಬಿಕೆಗಳಿಗೆ ದಕ್ಕೆಯಾಗಿರುವುದಾಗಿ ಚರ್ಚೆಯಾಗುತ್ತಿದೆ.

ಇದರ ಬೆನ್ನಲ್ಲೆ ‘ಟಿಟಿಡಿ’ ಯ (Tirumala Tirupati Devasthanam) ಕಾರ್ಯನಿರ್ವಹಣಾಧಿಕಾರಿ ಜೆ. ಶ್ಯಾಮಲ ರಾವ್ ತುಪ್ಪದಲ್ಲಿ ಕಲಬೆರಕೆಯಾಗಿರುವದು ಸತ್ಯವೆಂದು ತಿಳಿಸಿದ್ದಾರೆ.

ಈ ಮಧ್ಯೆ ಕೇಂದ್ರ ಸರ್ಕಾರ ಕೂಡ ಮಧ್ಯ ಪ್ರವೇಶಿಸಿದ್ದು ಆರೋಗ್ಯ ಸಚಿವ ‘ಜೆ.ಪಿ ನಡ್ಡಾ’ ಇದರ ಕುರಿತಾಗಿ ವರದಿ ನೀಡುವಂತೆ ಆಂಧ್ರ ಸರ್ಕಾರಕ್ಕೆ ಸೂಚಿಸಿದ್ದಾರೆ. ಇದರ ನಡುವೆಯೇ ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ 1 ಲಕ್ಷ ತಿರುಪತಿ ಲಡ್ಡುಗಳು ತಲುಪಿಸಿ, ಪ್ರಸಾದವಾಗಿ ಭಕ್ತರಿಗೆ ಹಂಚಲಾಗಿದ್ದು ಭಕ್ತರಲ್ಲಿ ಆತಂಕ ಮನೆ ಮಾಡಿದೆ

ಈ ಮೊದಲು ಕರ್ನಾಟಕದ ‘ನಂದಿನಿ’ ತುಪ್ಪವನ್ನು ತಿರುಪತಿ ಲಡ್ಡು ತಯಾರಿಸಲು ಪೂರೈಕೆ ಮಾಡಲಾಗುತಿತ್ತು. ನಂತರ ಜಗನ್ ಮೋಹನ್ ರೆಡ್ಡಿ ಸರ್ಕಾರ ‘ನಂದಿನಿ ತುಪ್ಪ’ ದುಬಾರಿಯೆಂದು ಬೇರೆ ಕಡೆಯಿಂದ ತುಪ್ಪವನ್ನು ತರೆಸಿಕೊಂಡಿರುವುದರ ಹಿಂದೆ ಕಮಿಷನ್ ಪಡೆಯುವ ಹುನ್ನಾರವಿರಬಹುದೆಂದು ಆರೋಪಿಸಲಾಗುತ್ತಿದೆ. ಇದರ ಕುರಿತಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪ್ರತಿಕ್ರಯಿಸಿದ್ದು ‘ನಾವು ಕಲಬೆರಕೆ ತುಪ್ಪದ ಖರೀದಿಯನ್ನು ನಿಲ್ಲಿಸಿದ್ದು, ಸದ್ಯ ನಂದಿನಿ ಬ್ರಾಂಡ್ ತುಪ್ಪವನ್ನೇ ಬಳಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಈ ಎಲ್ಲದರ ನಡುವೆ ಕರ್ನಾಟಕದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಸ್ಥಾನಗಳಲ್ಲೂ ಹಂಚುವ ಪ್ರಸಾದ, ದಾಸೋಹಗಳಲ್ಲಿ ನಂದಿನಿ ತುಪ್ಪವನ್ನು ಮಾತ್ರ ಬಳಸುವಂತೆ ಹಾಗೂ ಪ್ರಸಾದದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ದತ್ತಿ ಇಲಾಖೆ ಆದೇಶಿಸಿದೆ.