Work from home

‘Work from home’ ಈ ಪದಬಳಕೆ ಕೋವಿಡ್ ನಂತರ ದಿನಬಳಕೆಯ ಪದವಾಗಿದೆ. ಬೇರೆ ದೇಶಗಳಲ್ಲಿ ಸರ್ವೇ ಸಾಮಾನ್ಯವಾಗಿದ್ದ ಈ ಪದ ನಮ್ಮ ಭಾರತದಲ್ಲಿ ಈಗ ಹೆಚ್ಚು ಬಳಕೆಯಾಗ್ತಿದೆ. ಎಷ್ಟೋ ಐಟಿ ಕೆಲಸಗಾರರಿಗೆ ಇನ್ನು ಆಫೀಸ್‌ನಿಂದ ಕೆಲಸ ಮಾಡಬೇಕಾಗುತ್ತೆ ಅಂದ ಕೂಡಲೇ ಮುಖ ಬಾಡುತ್ತದೆ. ಆದರೆ ಮಾನಸಿಕ ಆರೋಗ್ಯಕ್ಕೆ Work from office ಬೆಸ್ಟ್ ಅಂತಿವೆ ಅಧ್ಯಯನಗಳು!

ಹೌದು.. US ಆಧಾರಿತ ಸಂಶೊಧನಾ ಸಂಸ್ಥೆಯಾದ ‘Sapien Lab’ ನ ಅಧ್ಯಯನವು ಸುಮಾರು 64 ದೇಶಗಳಲ್ಲಿ ಉದ್ಯೊಗದಲ್ಲಿದ್ದ ಒಟ್ಟು 54,831 ಜನರನ್ನು ಒಳಪಡಿಸಿದ್ದ ಜಾಗತಿಕ ಸಮೀಕ್ಷೆಯಲ್ಲಿ ಸಹೋದ್ಯೋಗಿಗಳ ಜೊತೆಗಿನ ಸಂಬಂಧಗಳ ಮಹತ್ವ ಮತ್ತು ಮಾಡುತ್ತಿರುವ ಕೆಲಸದ ಉದ್ದೇಶ ಮತ್ತು ಅದರ ಪ್ರಜ್ಞೆಯು ಮಾನಸಿಕ ನೆಮ್ಮದಿ ಕಾಯ್ದುಕೊಳ್ಳುವಲ್ಲಿ ಪ್ರಧಾನ ಕಾರ್ಯ ನಿರ್ವಹಿಸುತ್ತದೆ ಎಂದು ವರದಿ ಮಾಡಿದೆ.

ಈ ವರದಿಯಿಂದ ಆಫೀಸಿನಲ್ಲಿ ಮತ್ತು ಹೈಬ್ರಿಡ್ ಕೆಲಸ ಮಾಡಿತ್ತಿರುವವರಿಗಿಂತ ಮನೆಯಿಂದ ಕೆಲಸ ಮಾಡುವವರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಹೆಚ್ಚು ಎಂದು ತಿಳಿದು ಬಂದಿದೆ.

work from office is best for mental health

ಆಫೀಸಿನಿಂದ ಕೆಲಸ ಮಾಡುವವರು ತಮ್ಮ ಸಹೋದ್ಯೋಗಿಗಳೊಂದಿಗೆ ಬೆರೆಯುವುದರಿಂದ, ಇಂತಿಷ್ಟೇ ಸಮಯದಲ್ಲಿ ನಿಗದಿಯಾದ ಕೆಲಸವನ್ನು ನಿರ್ವಹಿಸುವುದರಿಂದ ಮತ್ತು ತಾವು ಮಾಡಿದಂತಹ ಕೆಲಸಗಳಿಗೆ ಪ್ರಶಂಸೆ, ಶ್ಲಾಘನೆಗಳು ಸಿಗುವುದರಿಂದ ಆಫೀಸ್ ಹಾಗೂ ಹೈಬ್ರಿಡ್ ಕೆಲಸ ಮಾಡುತ್ತಿರುವವರ ಮಾನಸಿಕ ಸ್ಥಿತಿ ಉತ್ತಮವಾಗಿದೆ ಎಂದು ಅಧ್ಯಯನದಲ್ಲಿ ವರದಿಯಾಗಿದೆ.

ಆದರೆ ಮನೆಯಿಂದ ಕೆಲಸ ಮಾಡುವವರಲ್ಲಿ ಸಹೋದ್ಯೋಗಿಗಳೊಂದಿಗೆ ಸಂಹವನ ಮಾಡದೇ ಇರುವುದರಿಂದ, ಹೇಗೂ ಮನೆಯಲ್ಲಿಯೇ ಕೆಲಸವೆಂದು ನಿಗದಿತ ಸಮಯದಲ್ಲಿ ಕೆಲಸ ಮಾಡದೇ ಯಾವುದೋ ಸಮಯದಲ್ಲಿ ಕೆಲಸ ಪೂರೈಸುವುದರಿಂದ, ಏಕಾಂಗಿತನ, ತಮ್ಮ ಕೆಲಸಕ್ಕೆ ಸರಿಯಾದ ಪ್ರಶಂಸೆಗಳ ಕೊರತೆ ಮತ್ತು ಬೇಡದಿರುವ ಆಲೋಚನೆಗಳಿಂದ ಖಿನ್ನತೆಯಂತಹ ಮಾನಸಿಕ ಅಸಮತೋಲನ ಉಂಟಾಗುತ್ತಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ನಡೆಸಿದ ಅಧ್ಯಯನ ಪ್ರಕಾರ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಸಹೋದ್ಯೋಗಿಗಳೊಂದಿಗೆ ಬೆರೆಯದೆ ಇರುವುದು ಮತ್ತು ಉದ್ಯೋಗದಲ್ಲಿ ಮಾನಸಿಕ ಕಿರಿಕಿರಿ ಇಲ್ಲಿಯೇ ಹೆಚ್ಚಂತೆ! ಪಾಶ್ಚಿಮಾತ್ಯ ದೇಶಗಳಲ್ಲಿ ಟೀಮ್‌ಗಳಲ್ಲಿ ಕೆಲಸ ಮಾಡುವವರಲ್ಲಿ ಮಾನಸಿಕ ಆರೋಗ್ಯ ಉತ್ತಮವಾಗಿದೆ ಎಂದು ಹೇಳಲಾಗಿದೆ.

ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಕೊಡುವ ಮುನ್ನ ಉದ್ಯೋಗಿಗಳ ಮಾನಸಿಕ ಆರೋಗ್ಯವನ್ನು ಕಂಪೆನಿಗಳು ಪರಿಗಣಿಸಬೇಕೆಂದು Sapien Lab ಸೂಚಿಸಿದೆ.